ನವದಾಟೋಳಿ
	ಭಾರತದ ಒಂದು ಉತ್ತಮ ತಾಮ್ರಶಿಲಾಯುಗೀಯ ನಿವೇಶನ; ಮಧ್ಯಪ್ರದೇಶದ ಪಶ್ಚಿಮಕ್ಕೆ, ನರ್ಮದಾನದಿಯ ದಕ್ಷಿಣದಂಡೆಯ ಮೇಲೆ ಇದೆ. ನಾವ್ಡಾ ಟೊಳಿ ಎಂದೂ ಇದನ್ನು ಕರೆಯಲಾಗಿದೆ. ಇಲ್ಲಿ ನಾವ್ಡಾ + ಟೊಳಿ(ಲಿ) = ನಾವಿಕರ ಹಳ್ಳ ಎಂದು ಅರ್ಥ. 1953-54 ಹಾಗೂ 1957-59ರ ಉತ್ಖನನಗಳಿಂದ ಇಲ್ಲಿನ ತಾಮ್ರಶಿಲಾಯುಗದ ಜನಜೀವನದ ಅನೇಕ ಕುರುಹುಗಳು ಲಭ್ಯವಾದವು. ಇಲ್ಲಿನ ನಾಲ್ಕು ದಿಣ್ಣೆಗಳನ್ನು ಸಮತಲ-ಉತ್ಖನನ ಮಾಡಲಾಗಿ ಭೂಗತವಾಗಿದ್ದ ಮಡಕೆ ಕುಡಿಕೆ, ಆಯುಧ ಮುಂತಾದವುಗಳು ದೊರೆತವು. ಕಪ್ಪು ಮತ್ತು ಕೆಂಪು, ಕೆಂಪುಬಣ್ಣದ ಮೇಲೆ ಕಪ್ಪು ಹಾಗೂ ಅದರ ಮೇಲೆ ಬಿಳಿ ಬಣ್ಣದ ಚಿತ್ರಗಳಿರುವ ನಸುಕೆಂಪು ಬಣ್ಣದ ನಾನಾಬಗೆಯ ಮಡಕೆ ಕುಡಿಕೆಗಳು ಸಿಕ್ಕಿವೆ. ಇವುಗಳಲ್ಲಿ 75ರಷ್ಟು ಮಾಳ್ವಾ-ವೇರ್ ಎಂದು ಹೇಳಲಾಗುವ ಮಡಕೆಗಳು. ಅಂತೆಯೇ ಈ ಬಗೆಯ ಮಡಕೆಗಳನ್ನು ಬಳಸಿದ ಚಾಲ್ಕೊಲಿತಿಕ್ ಸಂಸ್ಕøತಿಯ ನಿವೇಶನಗಳಲ್ಲೆಲ್ಲ ನವದಾಟೋಳಿ ಗಣನೀಯವಾದ್ದು. ಚಿತ್ರಾಲಂಕರಣೆಗಳುಳ್ಳ ಮಡಕೆಗಳು ಇಲ್ಲಿ ಹೇರಳವಾಗಿ ಸಿಕ್ಕಿವೆ. ಸುಮಾರು 600ಕ್ಕೂ ಹೆಚ್ಚು ವಿವಿಧ ವಿನ್ಯಾಸ ಅಲಂಕರಣೆಗಳುಳ್ಳ ಇವುಗಳ ಮೇಲೆ ಪ್ರಾಣಿ, ಪಕ್ಷಿ, ಪ್ರಕೃತಿ ಚಿತ್ರಗಳಿರುವುದು ಗಮನಾರ್ಹ. ನವಿಲು, ಕಪ್ಪುಬಾತು ಮುಂತಾದ ಪಕ್ಷಿಗಳೂ ಎತ್ತು ಕುರಿ ನಾಯಿ ಜಿಂಕೆ ಹಂದಿ ಹುಲಿ ಚಿರತೆ ನರಿ ಆಮೆ ಮೊಸಳೆ ಮುಂತಾದ ಪ್ರಾಣಿಚಿತ್ರಗಳು ಲತೆ ಸೂರ್ಯೋದಯ ಮುಂತಾದ ಪ್ರಕೃತಿ ಚಿತ್ರಗಳೂ ಆಕರ್ಷಕವಾಗಿವೆ. ತೀರ ಸಾಂಪ್ರದಾಯಿಕವಾಗಿ ಚಿತ್ರಿಸಿದ ಮನುಷ್ಯಚಿತ್ರಗಳನ್ನು ಗುರುತಿಸಲಾಗಿದೆ. ಇವೆಲ್ಲವುಗಳ ವಿವರಪೂರ್ಣ ಅಧ್ಯಯನದಿಂದ ಈ ಜನರ ಕಲೆ, ಸಂಸ್ಕøತಿ ಹಾಗೂ ಸಾಮಾಜಿಕ ಜೀವನಗಳನ್ನು ತಕ್ಕಮಟ್ಟಿಗೆ ಪುನಾರಚಿಸಬಹುದಾಗಿದೆ.

	ತಾಮ್ರ ಹಾಗೂ ಶಿಲೆಯ ಕೊಡಲಿಯೇ ಮುಂತಾದ ಆಯುಧಗಳಿಂದ ಕಾಡು ಕಡಿದು ಮಾಡಿದ ನಿವೇಶನದಲ್ಲಿ ಇವರು ವೃತ್ತಾಕಾರದ (3 ಮೀ ವ್ಯಾಸವುಳ್ಳ) ಇಲ್ಲವೆ ಆಯತಾಕಾರದ (3 ಮೀ ಉದ್ದ, 2.1 ಮೀ ಅಗಲವುಳ್ಳ) ಮನೆಗಳನ್ನು ಕಟ್ಟಿಕೊಂಡಿದ್ದರೆಂದು ತಿಳಿದುಬರುತ್ತದೆ. ಮನೆಯ ಅಡುಗೆಕೋಣೆಯಲ್ಲಿ ಒಂದು ಇಲ್ಲವೆ ಎರಡು ಒಲೆಗಳನ್ನು (ಚುಲ್ಹಾ) ಗುರುತಿಸಲಾಗಿದೆ. ಕಾಳುಕಡ್ಡಿಗಳನ್ನು ಸಂಗ್ರಹಿಸಿಡಲು ಜಾರು ಹಾಗೂ ಮಣ್ಣಿನ ದೊಡ್ಡ ಪಾತ್ರೆಗಳನ್ನು ಬಳಸುತ್ತಿದ್ದು ಅವನ್ನು ಮನೆಯ ಮತ್ತೊಂದು ಕೋಣೆಯಲ್ಲಿ ಗೋಡೆಗೆ ಆನಿಸಿಟ್ಟಿದ್ದು ತಿಳಿದುಬಂದಿದೆ. ಉತ್ಖನನದಲ್ಲಿ ಸುಟ್ಟ ಎಣ್ಣೆಬೀಜ, ದ್ವಿದಳಧಾನ್ಯಗಳು ಸಿಕ್ಕಿವೆ.

	ಕಂಚು ತಾಮ್ರ ದಂತ ಎಲುಬುಗಳಿಂದ ತಯಾರಿಸಿದ ವಿವಿಧ ಗೃಹೋಪಕರಣಗಳೂ ಆಯುಧಗಳೂ ನಾನಾಬಗೆಯ ಮಣಿಗಳೂ ಮೃಣ್‍ಮೂರ್ತಿಗಳೂ ಸಾಕಷ್ಟು ಸಿಕ್ಕಿವೆ. ಇವು ಈ ಜನರ ಧಾರ್ಮಿಕ, ಕಲಾತ್ಮಕ ಜೀವನದ ಮೇಲೆ ಹೊಸ ಬೆಳಕು ಚೆಲ್ಲುವಂಥವು. ಮಾತೃದೇವತೆ, ವೀರದೇವತೆಗಳನ್ನು ಬಹುಶಃ ಆರಾಧಿಸುತ್ತಿದ್ದ ಈ ಜನ ತಮ್ಮ ನೆರೆಹೊರೆಯೊಡನೆ ಸಂಪರ್ಕವಿಟ್ಟುಕೊಂಡಿದ್ದಿರಬೇಕು. ಬೇರೆ ಬೇರೆ ಉದ್ಯಮಗಳಲ್ಲಿ ನಿಷ್ಣಾತರಾಗಿದ್ದಿರಬೇಕು. ಮಣ್ಣಿನ ಕೋಟೆ ಭಾಗ, ಕಲ್ಲುಗಳಿಂದ ತಯಾರಿಸಿದ ಗದೆ, ಕಾಲ್ಚೆಂಡುಗಳು ಇವು ಇವರ ರಕ್ಷಣಾವ್ಯವಸ್ಥೆಯನ್ನು ತಿಳಿಯಲು ಸಹಾಯಕವಾಗಿದೆ.

	ಪ್ರಧಾನವಾಗಿ ಕೃಷಿಯನ್ನಾಧರಿಸಿದ್ದ ಈ ಜನ ಯಾರೆಂಬುದು ಸ್ಪಷ್ಟವಾಗಿ ತಿಳಿಯದು. ಇವರ ಶವಸಂಸ್ಕಾರ ಪದ್ಧತಿ ಯಾವ ಬಗೆಯದಿತ್ತೆಂದು ಸೂಚಿಸುವ ಯಾವ ಅವಶೇಷಗಳೂ ಸಿಕ್ಕದಿರುವುದು ಗಮನಾರ್ಹ. ಕ್ರಿ.ಪೂ. ಸುಮಾರು 1600-1300 ರಲ್ಲಿ ಈ ಜನ ಅದೇ ಸ್ಥಳದಲ್ಲಿ ಜೀವಿಸಿದ್ದರೆಂದು ತಿಳಿದುಬರುತ್ತದೆ.		
		(ಎಚ್.ಆರ್.ಆರ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ